ಚಾಮುಂಡಿ ಬೆಟ್ಟ-
ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಅದರ ಆಗ್ನೇಯಕ್ಕೆ ಪೂರ್ವಪಶ್ಚಿಮವಾಗಿ ಹಬ್ಬಿ ನಿಂತಿರುವ ಬೆಟ್ಟ. ಸಮುದ್ರಮಟ್ಟದಿಂದ 3,489 ಅಡಿ ಎತ್ತರವಾಗಿದೆ. ಮೈಸೂರು ಒಡೆಯರ ಮನೆದೇವರಾದ ಚಾಮುಂಡೇಶ್ವರಿಯ ದೇವಾಲಯ ಈ ಬೆಟ್ಟದ ಮೇಲಿದೆ. ಆದ್ದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ. ಸುತ್ತಲೂ ಬಯಲಿದ್ದು, ಒಂಟಿಯಾಗಿ ನಿಂತಿರುವ ಕಡಿದಾದ ಈ ಬೆಟ್ಟ ಬಹುದೂರದವರೆಗೂ ಗೋಚರಿಸುವುದಲ್ಲದೆ, ಬೆಟ್ಟದ ಮೇಲೆ ನಿಂತು ನೋಡಿದಾಗ ಮೈಸೂರಿನ ಹರವು ಮತ್ತು ಸುತ್ತಲಿನ ಪ್ರಕೃತಿ ಸೌಂದರ್ಯ ರಮ್ಯವಾಗಿ ಕಾಣಿಸುತ್ತದೆ. ಮೈಸೂರಿಗೆ ಬರುವ ಪ್ರವಾಸಿಗಳ ಆಕರ್ಷಣೆಗಳಲ್ಲಿ ಇದೂ ಒಂದು-ಮುಖ್ಯವಾದದ್ದು.

ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯಕ್ಷೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಧಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ 1128ರಲ್ಲಿ ಈ ಮರ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದೆ. ಆದರೆ ಅದರ ಮುಂದಿನ ಮಂಟಪವನ್ನು 17ನೆಯ ಶತಮಾನದಲ್ಲಿ ಕಟ್ಟಿಸಿದುದಾಗ ಅದರ ಕಂಬಗಳ ಮೇಲಿನ ಶಾಸನಗಳಿಂದ ತಿಳಿದುಬರುತ್ತದೆ.

ಮೈಸೂರರಸರು ಬೆಟ್ಟದ ಮೇಲಿದ್ದ ಮಹಿಷಾಸುರಮರ್ದಿನಿಯನ್ನು ಚಾಮುಂಡೇಶ್ವರಿ ಎಂಬ ಹೆಸರಿನಿಂದ ತಮ್ಮ ಮನೆದೇವರಾಗಿ ಸ್ವೀಕರಿಸಿದ ಮೇಲೆ ಮರ್ಬಳ ತೀರ್ಥಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿರಬೇಕು. ಅನಂತರ ಅಲ್ಲಿದ್ದ ದೇವಿಯ ಆಲಯಕ್ಕೆ ಪ್ರಾಮುಖ್ಯ ಹೆಚ್ಚಿ ದೇವಾಲಯ ವಿಸ್ತಾರವಾಗುತ್ತ ಹೋಯಿತು. ದೊಡ್ಡ ದೇವರಾಜ ಒಡೆಯರು ಬೆಟ್ಟಕ್ಕೆ ಸಾವಿರ ಮೆಟ್ಟಲುಗಳನ್ನು ಕಟ್ಟಿಸಿದರಲ್ಲದೆ, ಬೆಟ್ಟದ ಮೇಲೆ 700ನೆಯ ಮೆಟ್ಟಲಿನ ಹತ್ತಿರ ಬಹುಶಃ ಅಲ್ಲಿಯೇ ಇದ್ದ ಬಂಡೆಗಲ್ಲೊಂದನ್ನು ಕಡೆದು ಮಾಡಿದ ಬೃಹದಾಕಾರದ ನಂದಿಯನ್ನು ಪ್ರತಿಷ್ಠೆ ಮಾಡಿದರು. ತಲೆ ಎತ್ತಿ ಮಲಗಿರುವ ಈ ನಂದಿಯ ಮೂರ್ತಿ 16' ಎತ್ತರವಾಗಿದೆ; ದಷ್ಟಪುಷ್ಟವಾಗಿರುವಂತೆ ಕಂಡರಿಸಲ್ಪಟ್ಟಿದೆ. ಗಂಟೆಸರ, ಗೆಜ್ಜೆಸರ, ಗವುಸುಗಳಿಂದ ಅಲಂಕೃತವಾಗಿದ್ದು ಸಹಜ ಮುಖಲಕ್ಷಣಗಳಿಂದ ಕೂಡಿರುವ ಈ ನಂದಿ ತನ್ನ ಬೃಹದ್ಗಾತ್ರದಿಂದ ಅತ್ಯಂತ ಆಕರ್ಷಣೀಯವಾಗಿದೆ.

ಚಾಮುಂಡೇಶ್ವರಿಯ ದೇವಾಲಯ ದ್ರಾವಿಡ ಶೈಲಿಯಲ್ಲಿ ಕಟ್ಟಿರುವ, ತಕ್ಕಮಟ್ಟಿಗೆ ದೊಡ್ಡದಾದ ದೇವಾಲಯ. ಮೂಲ ದೇವಾಲಯದ ನಿರ್ಮಾಣ ಕಾಲವನ್ನು ತಿಳಿಯಲು ಈಗ ಆಧಾರಗಳಿಲ್ಲ. ಮೈಸೂರು ಒಡೆಯರ ಕಾಲದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರು ಇದನ್ನು ನವೀಕರಿಸಿ ಇದರ ಮಹಾದ್ವಾರಕ್ಕೆ ಒಂದು ಸುಂದರವಾದ ಗೋಪುರವನ್ನು ಕಟ್ಟಿಸಿದರು. ನಂಜನಗೂಡು, ಚಾಮರಾಜನಗರ, ಮೈಸೂರುಗಳಲ್ಲಿ ಇವರು ಕಟ್ಟಿಸಿದ ಗೋಪುರಗಳಂತೆಯೇ ಇಟ್ಟಿಗೆ ಗಾರೆಯಲ್ಲಿ ಕಟ್ಟಿರುವ ಈ ಗೋಪುರವೂ ಮೇಲೆ ಹೋಗುತ್ತ ಕಿರಿದಾಗುವ ಏಳು ಅಂತಸ್ತುಗಳಿಂದ ಕೂಡಿ ಉನ್ನತವಾಗಿದೆ. ಹೊರಮೈಯಲ್ಲಿ ಒಂದೊಂದು ಅಂತಸ್ತಿನಲ್ಲೂ ಕಿರುಗೋಪುರಗಳು ತುಂಬಿದ್ದು, ನಡುವಿನ ದ್ವಾರಗಳ ಇಕ್ಕೆಲಗಳಲ್ಲೂ ದ್ವಾರಪಾಲಕರೂ ಗೋಪುರದ ಎರಡೂ ಪಕ್ಕಗಳಲ್ಲಿ ಕುಳಿತಿರುವ ಮೂರ್ತಿಗಳೂ ತುದಿಯಲ್ಲಿ 7 ಕಳಶಗಳುಳ್ಳ ಶಿಖರವೂ ಇವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಮತ್ತು ಇವರ ಪತ್ನಿಯರಾದ ದೇವಾಜಮ್ಮಣ್ಣಿ, ಚೆಲುವಾಜಮ್ಮಣ್ಣಿ ಮತ್ತು ಲಿಂಗಾಜಮ್ಮಣ್ಣಿಯವರ ಭಕ್ತವಿಗ್ರಹಗಳನ್ನು ಈ ದೇವಾಲಯದಲ್ಲಿಯೂ ನಿಲ್ಲಿಸಿದ್ದಾರೆ. ಈ ಮೂರ್ತಿಗಳ ಪೀಠದ ಮೇಲೆ ಅವರ ಹೆಸರುಗಳಿವೆ. ಇವು ಒಡೆಯರ ಕಾಲದ ಮೂರ್ತಿಶಿಲ್ಪಕ್ಕೆ ಮಾದರಿಯಾಗಿವೆ. ಸುಕನಾಸಿ ಮತ್ತು ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನವೇ ಮೊದಲಾದ ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳು-ಮುಂತಾದವು ದೇವಾಲಯಕ್ಕೆ ಇವರೂ ರಾಜಮನೆತನದವರೂ ಮಾಡಿಸಿರುವ ಸೇವೆಗಳು.

ಆಶ್ವೀಜ ಶುದ್ಧ ಹುಣ್ಣಿಮೆಯಂದು ನಡೆಯುವ ಚಾಮುಂಡೇಶ್ವರಿ ರಥೋತ್ಸವವೂ ಅದಾದ ಎರಡು ದಿವಸಗಳಿಗೆ ದೇವಾಲಯಕ್ಕೆ ಹತ್ತಿರದಲ್ಲಿರುವ ದೇವಿ ಕೊಳದಲ್ಲಿ ರಾತ್ರಿ ನಡೆಯುವ ತೆಪ್ಪೋತ್ಸವವೂ ಪ್ರಖ್ಯಾತವಾಗಿವೆ. ಈ ಸಮಯದಲ್ಲಿ ಸಹಸ್ರಾರು ಭಕ್ತರೂ ಪ್ರವಾಸಿಗಳೂ ಇಲ್ಲಿಗೆ ಬರುತ್ತಾರೆ.

ಬೆಟ್ಟದ ಪೂರ್ವ ತುದಿಯಲ್ಲಿ, ಅದಕ್ಕೆ ಸೇರಿದಂತೆಯೇ, ಲಲಿತಾದ್ರಿ ಎಂಬ ತಗ್ಗಾದ ಮೊರಡಿಯಿದೆ. ಪ್ರಶಾಂತ ವಾತಾವರಣದಿಂದ ಕೂಡಿರುವ ಈ ಎಡೆಯಲ್ಲಿ ಸುತ್ತಲೂ ಗಿಡಮರಗಳಿಂದಾವೃತವಾದ ಒಂದು ವಿಶ್ರಾಂತಿಗೃಹವಿದೆ. ಲಲಿತಾದ್ರಿಯ ಮೂಲಕವೇ ಬೆಟ್ಟದ ಮೇಲಕ್ಕೆ ವಾಹನಸಂಚಾರ ಮಾರ್ಗಗಳು ಹಾದುಹೋಗುತ್ತವೆ. ಹಿಂದಿನ ರಾಜರು ಕುದುರೆಯ ಮೇಲೆ ಬೆಟ್ಟವೇರುತ್ತಿದ್ದ ಸವಾರಿ ದಾರಿಯೊಂದು ಮೆಟ್ಟಿಲುಗಳ ಸಮೀಪದಲ್ಲಿದೆ.

ಬೆಟ್ಟದ ತುತ್ತತುದಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಒಂದು ಅರಮನೆಯುಂಟು. ಪ್ರವಾಸಿಗಳಿಗೆ ಮತ್ತೊಂದು ಆಕರ್ಷಣೆಯೆಂದರೆ ದೇವಾಲಯಕ್ಕೆ ಹೋಗುವ ದಾರಿಯಲ್ಲಿರುವ 12' ಎತ್ತರದ ಮಹಿಷಾಸುರ ವಿಗ್ರಹ. ದೇವಸ್ಥಾನದ ಹತ್ತಿರದಲ್ಲಿ ಸಣ್ಣ ಊರೊಂದು ಬೆಳೆದಿದೆ.						(ಎಂ.ಎಚ್.; ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ